ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಸಣ್ಣ ಸಣ್ಣ ಖುಷಿಯನ್ನೂ ಸಂಭ್ರಮಿಸೋಣ..

 'ಎಂಜಾಯ್ ದ ಲಿಟ್ಲ್ ತಿಂಗ್ಸ್' ಅನ್ನೋದು ಖುಷೀಲಿರೋಕೆ ಇರುವ ಅತ್ಯಂತ ಸುಲಭದ ಮತ್ತು ಪರಿಣಾಮಕಾರಿ ಉಪಾಯ! ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಚಿನ್ನದ (ಗಾದೆ) ಮಾತುಗಳೆಲ್ಲಾ ನಿಜವೇ ಹೌದಾದರೆ ಖುಷಿಗೊಂದು ನೆಪಹುಡುಕುವವನಿಗೆ ಕಂಡಲ್ಲೆಲ್ಲಾ ಖುಷಿ ಕಾಣಿಸದೇಕೆ? ಸ್ಪರ್ಧೇ ಗೋಲ್ಡು ಮೆಡಲೇ ಸಿಗಬೇಕಿಲ್ಲ, ಪರೀಕ್ಷೇಲಿ ಫಸ್ಟ್ ರ್ಯಾಂಕೇ ಬರಬೇಕಿಲ್ಲ, ಪರ್ಸಿನ ತುಂಬಾ ಕಾಸು ಇರಬೇಕೆಂದಿಲ್ಲ; ಆದರೂ ಖುಷೀಲಿರಬಹುದು!

ಎದುರು ಸಿಕ್ಕವರಿಂದ ಪುಕ್ಕಟೆಯಾಗಿ ಸಿಕ್ಕ ಒಂದು ನಿಷ್ಕಲ್ಮಶ ನಗುವಿನ ಗಿಫ್ಟು, ಮೊದಲ ಪ್ರಯತ್ನದಲ್ಲಿ ದೊರೆತ ಪುಟಾಣಿ ಗೆಲುವು, ನಮ್ಮ ವ್ಯಕ್ತಿತ್ವದಲ್ಲಾದ ಪುಟ್ಟ ಸಕಾರಾತ್ಮಕ ಬದಲಾವಣೆ, ರ್‍ಯಾಂಕು ಬಾರದಿದ್ದರೂ ಫಸ್ಟ್/ಸೆಕೆಂಡ್ ಕ್ಲಾಸ್ ಮಾರ್ಕಿನ ನಿಡುಸುಯ್ಗೆ, ಪರ್ಸು ಖಾಲಿಯಾದರೂ ಆಪತ್ಕಾಲದಲ್ಲಿ ಕ್ರೇಝಿಗಾಗಿ ಕೂಡಿಟ್ಟ ಚಿಲ್ಲರೆ ಕಾಸಿನ ನೆರವು. ಹೀಗೆ ಸಿಕ್ಕ ಸಿಕ್ಕದಕ್ಕೆಲ್ಲಾ ಖುಷಿಪಡುವುದಕ್ಕಿಂತ ಬೇರೆ ಯಾವುದಿದೆ ಹೇಳಿ ಖುಷೀಲಿರೋಕೆ ಒಳ್ಳೆಯ ಉಪಾಯ? ಬದುಕಿನಲ್ಲಿ ನಗುನಗುತ್ತಿರೋದಕ್ಕೆ ನಿಜಕ್ಕೂ ನೂರು ವಿಚಾರಗಳಿರುತ್ತವೆ. ಆದರೆ ಆ ಖುಷಿಯ ಸಂಗತಿಗಳನ್ನೆಲ್ಲಾ ಒಪ್ಪಿಕೊಂಡು ಖುಷಿಪಡೋದಕ್ಕೆ ನಮ್ಮ ಮನಸ್ಸು ತಯಾರಿರಬೇಕಷ್ಟೇ!


ಅಳುತ್ತಾ ಕೂರೋದಕ್ಕೆ ಒಂದು ನೆಪ ಹುಡುಕೋದಲ್ಲ. ಯಾವಾಗಲೂ ನಗು ನಗುತ್ತಿರೋದಕ್ಕೆ ಒಂದು ಕುಂಟು ನೆಪ ಹುಡುಕೋಣ. ಒಂದು ಚಂದದ ಚಿತ್ರ ದಿಟ್ಟಿಸುತ್ತ ಮನದ ನೋವು ಮರೆಯೋಣ. ಹಳೆಯ ಮಧುರ ಗೀತೆ ಕೇಳಿ ಮನ ಹಗುರ ಮಾಡಿಕೊಳ್ಳೋಣ. ಆಡೋಕೆ ಬಾರದಿದ್ರೂ ಸುಮ್ನೆ ಸ್ನೇಹಿತರೊಂದಿಗೆ ಗೇಮ್ನಲ್ಲಿ ಕೈ ಸೇರಿಸೋಣ. ತರ್ಲೆ ತರ್ಲೆ ಮನದ ಮಾತುಗಳನ್ನೆಲ್ಲಾ ಒಂದೆಡೆ ಗೀಚಿ ನಾವೇ ಓದಿ ನಗೋಣ. ಸ್ನೇಹಿತ ಕಿವಿ ಮುಚ್ಚಿಕೊಂಡ್ರೂ ಪರವಾಗಿಲ್ಲ ಸುಮ್ನೆ ನಕ್ಕು ಮತ್ತೆ ಗೀತೆಯೊಂದರ ಗುನುಗುವಿಕೆಯಲ್ಲಿ ಮಗ್ನರಾಗೋಣ. ಈ ಪುಟ್ ಪುಟಾಣಿ ಚಟುವಟಿಕೆಗಳೆಲ್ಲಾ ನಮ್ಮನ್ನು ಕೈ ಹಿಡಿದು ಸಮಾಧಾನಿಸಲಾರದೇಕೆ? ಕಚಗುಳಿಯಿಟ್ಟು ಮುನ್ನಡೆಸಲಾರದೇಕೆ?


ಪ್ರೀತಿಸುವ ಹುಡುಗಿಯ ವಾರೆ ನೋಟದ ಪುಳಕ, ಕ್ರೀಡೆಯಲ್ಲೊಂದು ಚಿನ್ನದ ಪದಕ, ಪ್ರಿಯಕರನ ಮತ್ತೇರಿಸೋ ಸಿಹಿ ಮುತ್ತು, ಭಾಸ್ನಿಂದ ಒಂದು ಶಭಾಶ್ಗಿರಿ, ಪರೀಕ್ಷೇಲಿ 90 ಶೇ. ಮಾರ್ಕ್ಸು, ಶಾರೂಖ್‌ ಖಾನ್‌ನಂತ ಗಂಡ-ಸೋನಾಕ್ಷಿ ಸಿನ್ಹಾನಂತಹ ಸ್ಫುರದ್ರೂಪಿ ಹೆಂಡತಿ, ಕೈ ತುಂಬಾ ಕಾಸು, ಸಿನೆಮಾ ಪಾರ್ಕ್ಸ್ ಸುತ್ತೋದಕ್ಕೊಂದು ಛಾನ್ಸು ಇಲ್ಲದಿದ್ದರೇನಂತೆ; ಖುಷೀಲಿರೋಕೆ ಇನ್ನೂ ನೂರೆಂಟು ದಾರಿಗಳುಂಟು.


ರಸ್ತೆ ದಾಟೋಕೆ ಒದ್ದಾಡುತ್ತಿರೋ ಮುದುಕನನ್ನು ಕೈ ಹಿಡಿದು ರಸ್ತೆ ದಾಟಿಸೋಣ. ಓದೋ ಬಡ ಹುಡುಗನಿಗೆ ಚಂದದ್ದೊಂದು ಪೆನ್ನು ಕೊಟ್ಟು 'ಚೆನ್ನಾ ಓದು ಪುಟ್ಟಾ..' ಅಂತ ಪ್ರೀತಿಯಿಂದ ಬೆನ್ನು ನೇವರಿಸೋಣ. ಹಾಸ್ಟೆಲ್‌ನಲ್ಲಿ ಪುಟ್ಟ ಹುಡುಗಿ ನಡುರಾತ್ರಿ, 'ಉಚ್ಚೆ ಹುಯ್ಯೋಕೆ ಹೋಗೋಣ ಬಾ ಅಕ್ಕಾ..' ಅಂತ ಬೇಡಿಕೊಂಡರೆ ಬೈದಾಡದೆ ಸುಮ್ಮನೆ ಅವಳ ಹಿಂದೆ ಹೋಗೋಣ. ದೇವರ ಹುಂಡಿಗೆ ಹಾಕೋಕೇಂತ ಎತ್ತಿಟ್ಟಿರೋ ಹಣಕ್ಕೆ ಇನ್ನೊಂದಿಷ್ಟು ಸೇರಿಸಿ ಅನಾರೋಗ್ಯದಿಂದ ನರಳುತ್ತಿರೋ ಎಳೆಯ ಕೂಸಿಗೆ ನೆರವು ನೀಡೋಣ. ಇವೆಲ್ಲದರಲ್ಲಿ ಸಿಗೋ ಖುಷಿಯಿದೆಯಲ್ಲ? ಅದು ಹುಡುಗಿಯ ಪಿಸು ಮಾತಿನಿಂದ ಸಿಗೋ ಪುಳಕವನ್ನು, ಗೋಲ್ಡು ಮೆಡಲಿನ ಸಡಗರವನ್ನು, ಡಿಸ್ಟಿಂಗ್ಶನ್ ಮಾರ್ಕ್ಸ್ ಕೊಡೋ ಹುರುಪನ್ನು, ದೇವರಿಗೆ ಹಣ್ಣುಕಾಯಿ ಅರ್ಪಿಸುವಾಗ ಆಗೋ ಸಮಾಧಾನವನ್ನು-ಸಂತೃಪ್ತ ಭಾವನೆಯನ್ನು ಖಂಡಿತಾ ಮೀರಿಸುತ್ತೆ!

ಅಷ್ಟೇಯಾಕೆ. ಮನಸ್ಸಿಗೆ ಬೇಜಾರು ಅನ್ನಿಸುವಾಗ, ಸಾಂತ್ವನಿಸೋಕೆ ಯಾರೂ ಇಲ್ಲದಾಗ ಸುಮ್ಮನೆ ಮನೆಯ ಮುಂದೆ ಅರಳಿನಿಂತ ಹೂವನ್ನು ದಿಟ್ಟಿಸುತ್ತ ನಿಂತುಬಿಡೋಣ. ಕಣ್ಣೆದುರಿಗೆ ನಾನೇ ಸುರ ಸುಂದರಾಂಗ-ನಾನೇ ಬಲಭೀಮ ಅಂತ ಬೀಗುತ್ತ ಎದೆಯುಬ್ಬಿಸಿನಿಂತ ಬೃಹತ್ ಬೆಟ್ಟದತ್ತ ಕಣ್ಣು ಮಿಟುಕಿಸಿ ನಗೋಣ. ಮನದೊಳಗೆ ನೂರು ನೋವಿದ್ದರೂ ಲೋಕವನ್ನು ನಗಿಸಿದ ನಗುವಿನರಸ ಚಾರ್ಲಿ ಚಾಪ್ಲಿನ್, ಪ್ಯಾರಾ ಒಲಂಪಿಯನ್ ಕರ್ನಾಟಕದ ಗಿರೀಶ್, ಸ್ಫೂರ್ತಿಯ ಚಿಲುಮೆ ನಿಕ್ ವೋಯಾಚಿಚ್, ಕಿಚ್ಚಿನ ಕ್ರೀಡಾಪಟು ಮಿಲ್ಖಾ ಸಿಂಗ್ ಎಲ್ಲರನ್ನೊಮ್ಮೆ ನೆನಪು ಮಾಡಿಕೊಳ್ಳೋಣ. ಸ್ಫೂರ್ತಿ ತುಂಬಿಕೊಳ್ಳೋಣ. ಮೈ ಕೊಡವಿ ಎದ್ದು ಇಲ್ಲೋಣ.


ಕಾಲಿಲ್ಲದೋರು, ಕಣ್ಣಿಲ್ಲದೋರು, ಬಡತನದ ಬೇಗೆಯಲ್ಲಿ ಮನಸು ಸುಟ್ಟುಕೊಂಡವರು, ಅನಾಥರು ಯಾರ್ಯಾರೋ ಸಾಧಿಸಿದ್ದಾರಂತೆ. ಗೆಲುವಿನ ನಗುವುನೊಂದಿಗೆ ಬೀಗಿದ್ದಾರಂತೆ. ನಮಗ್ಯಾಗೆ ಆಗಲಾರದು ಅಲ್ವಾ? ಮೈ ಬಗ್ಗಿಸಿ ದುಡಿದರೆ, ಶತ ಶ್ರಮ ಪಟ್ಟರೆ ಕೈಲಾಗದ್ದು ಯಾವುದಿದೆ ಹೇಳಿ? ನೋವಿರೋದು ನನಗೊಬ್ಬನಿಗೇ ಅಂತ ಪೆದ್ದು ಪೆದ್ದಾಗಿ ಹೇಳಿಕೊಳ್ಳೋ ನಾವೊಮ್ಮೆ ಕಣ್ಣು ತೆರೆದು ಲೋಕವನ್ನು ನೋಡೋಣ. ಜಗತ್ತು ಕಂಡ ನೋವಿನೆದುರು ನಮ್ಮ ನೋವು ಗೋಚರಕ್ಕೂ ಬಾರದಷ್ಟು ಪುಟ್ಟ ಚುಕ್ಕೆ ಅನ್ನೋದು ಮೆಲ್ಲ ಮೆಲ್ಲಗೆ ಅರಿವಾದೀತು.


ನಗು/ಖುಷಿ ದೈಹಿಕ-ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತೆ. ಮನುಷ್ಯ ಹೆಚ್ಚು ಖುಷಿಯಾಗಿದ್ದಷ್ಟೂ ದೇಹದ ಇಮ್ಯುನೋ ಸಿಸ್ಟಮ್ಮಿಗೆ ಚೈತನ್ಯ ಲಭಿಸುತ್ತೆ ಅನ್ನೋದು ವೈಜ್ಞಾನಿಕವಾಗೇ ಸಾಬೀತು. ಖುಷೀಲಿದ್ದಷ್ಟೂ ಸಾಧನೆಯೆಡೆಗಿನ ದಾರಿ ಸುಗಮ ಅನ್ನೋದನ್ನು ಬಲ್ಲವರು ಒಪ್ಪಿಕೊಂಡಿದ್ದಾರೆ ಕೂಡ. ಅದಕ್ಕೇತಾನೆ ಬಂಗಾರದ ಮನುಷ್ಯ ಹಾಡಿರೋದು 'ನಗು ನಗುತಾ ನಲೀ ನಲೀ.. ಏನೇ ಆಗಲಿ..' ಅಂತ.


ಖುಷೀಲಿದ್ದಷ್ಟೂ ಸಾಧನೆಯ ದಾರಿಯಲ್ಲಿ ನಾಲ್ಕು ಹೆಜ್ಜೆ ಹೆಚ್ಚೇ ಎತ್ತಿಹಾಕುವುದು ಸಾಧ್ಯವಾಗುವುದಾದರೆ ಮತ್ಯಾಕೆ ಚೌಕಾಸಿ? ಇದ್ದಷ್ಟು ಕಾಲ ಖುಷಿ ಖುಷಿಯಾಗಿ ಹಲ್ಲು ಕಿರಿಯೋಣ. ನಗುವಿಗೊಂದು ನೆಪ ಹುಡುಕುತ್ತಲೇ ಇರೋಣ. ನಂಗೆ ಅದುಸಿಕ್ಕಿಲ್ಲ ಇದು ಸಿಕ್ಕಿಲ್ಲ ಅನ್ನುವುದಕ್ಕಿಂತ ಸಿಕ್ಕ ಸಣ್ಣಸಣ್ಣ ಸಂಗತಿಗಳನ್ನೇ ಸಂಭ್ರಮಿಸಿ ಮುನ್ನಡೆಯೋಣ. ಬಿಕಾಸ್ ಕನಸುಗಳೆಲ್ಲ ಒದ್ದೆ ಪಟಾಕಿಯಂತಾಗಬಾರದು. ಚಿಮ್ಮೋ ರಾಕೆಟ್ಟಿನಂತೆ ಎತ್ತೆತ್ತರಕ್ಕೆ ಸಾಗಬೇಕು ನೋಡಿ!


-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು